ದಳವಾಣೂರ್
	ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ಜಿಂಜೀ ತಾಲ್ಲೂಕಿನಲ್ಲಿರುವ ಈ ಗ್ರಾಮದಲ್ಲಿ ಪಂಚಪಾಂಡವಮಲೈ ಎಂಬ ಬಂಡೆಯಲ್ಲಿ ಕೊರೆಯಲಾಗದ ಪಲ್ಲವರ ಕಾಲದ ಮನೋಜ್ಞವಾದ ಗುಹಾಂತದೇವಾಲಯವಿದೆ. ದೇವಾಲಯದ ಮೇಲ್ಭಾಗದಲ್ಲೊಂದು ನೈಸರ್ಗಿಕ ಆಸರೆಯಿದ್ದು, ಅದರಲ್ಲಿ ಎರಡು ಕಲ್ಲಿನ ಹಾಸುಗಳಿವೆ. ಬಹುಶಃ ಇವು ಜೈನಧರ್ಮಕ್ಕೆ ಸಂಬಂಧಿಸಿವೆ. ದೇವಾಲಯದ ಸುಮಾರು 32' ಉದ್ದ, 23' ಅಗಲ 7'ಎತ್ತರವಿದೆ. ಇಲ್ಲಿ ಎರಡು ಕಂಬಗಳು ಮತ್ತು ಎರಡು ಅರ್ಧಕಂಬಗಳಿದ್ದು ಗುಹೆಯನ್ನು ತಲಪಲು ಮೆಟ್ಟಿಲುಗಳಿವೆ. ಬೋದಿಗೆ ಮತ್ತು ಕಪೋತಗಳು ಸುಂದರವಾದ ನಕ್ಷೆಗಳಿಂದ ಕೂಡಿವೆ. ಕಂಬಗಳ ಚೌರಸ ಭಾಗಗಳಲ್ಲಿ ಆಳವಾಗಿ ಕೊರೆದ ಕಮಲಾಕೃತಿಯ ಅಲಂಕಾರಕ ಫಲಕಗಳಿವೆ. ಅಲ್ಲದೆ ಎರಡು ಕಂಬಗಳ ಮೇಲೆ ವಿವರವಾದ ಕೆತ್ತನೆಯುಳ್ಳ ಮಕರ ತೋರಣವಿದೆ. ಮುಂಭಾಗದ ಎರಡೂ ಕೊನೆಗಳಲ್ಲಿ ದ್ವಾರಪಲಕ ವಿಗ್ರಹಗಳಿವೆ. ಇವುಗಳ ತೊಡಿಗೆ ಮತ್ತು ಆಭರಣಗಳು ವಿಶಿಷ್ಟ ಪಲ್ಲವ ಶೈಲಿಯವಾಗಿವೆ. ಪಾಶ್ರ್ವದ ಗೋಡೆಯಲ್ಲಿ ಕೊರೆಯಲಾದ ಗರ್ಭಗೃಹ ದೇವಾಲಯದ ಅತಿಮುಖ್ಯವಾದ ಭಾಗ. ಇದು ಮುತ್ತರಯ್ಯರ್ ಮತ್ತು ಪಾಂಡ್ಯ ಗುಹಾಂರ್ತದೇವಾಲಯಗಳನ್ನು ಹೋಲುತ್ತದೆ. ಗರ್ಭಗೃಹದ ಇಕ್ಕೆಲಗಳಲ್ಲಿ ದ್ವಾರಪಾಲಕ ವಿಗ್ರಹಗಳಿವೆ. ದೇವಾಲಯದಲ್ಲಿ ಮೂರು ಶಾಸನಗಳಿವೆ. 3ನೆಯ ಶತಮಾನಕ್ಕೆ ಸೇರಿದ, ಪಲ್ಲವ-ಗ್ರಂಥ ಲಿಪಿಯ ಸಂಸ್ಕøತ ಶಾಸನದಿಂದ ಶತ್ರು ಮಲ್ಲೇಶ್ವರಾಲಯವೆಂಬ ದೇವಾಲಯ ಶತ್ರುಮಲ್ಲ ಎಂಬ ಬಿರುದುಳ್ಳ ಅರಸನಿಂದ ನಿರ್ಮಿಸಲ್ಪಟ್ಟಿತ್ತೆಂದು ತಿಳಿಯುತ್ತದೆ. ಈ ಬಿರುದು ಪಲ್ಲವ ಒಂದನೆಯ ಮಹೇಂದ್ರವರ್ಮನ ಬಿರುದುಗಳಲ್ಲೊಂದಾಗಿದ್ದು ಈ ದೇವಾಲಯ ಅವನಿಂದ ನಿರ್ಮಿಸಲ್ಪಟ್ಟಿತೆಂದು ಹೇಳಲಾಗಿದೆ, ಉಳಿದೆರಡು ಶಾಸನಗಳು ತಮಿಳಿನಲ್ಲಿ ತಮಿಳು ಅಕ್ಷರಗಳಿವೆ.	 				(ಪಿ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ